Tuesday, January 29, 2013

ಆಂಗ್ಲರ ನಾಡಿನಲ್ಲಿ ಸತ್ಯನಾರಾಯಣ ಪೂಜೆ!

ಮತ್ತೊಂದು ವಾರಾಂತ್ಯ, ಮತ್ತೊಂದು ಪ್ರವಾಸ!
ಈ ಸಲದ ಪ್ರವಾಸ 'ದೇಸಿ ಇಂಗ್ಲೆಂಡ್' ಎಂದು ಪ್ರಸಿದ್ದವಾಗಿರುವ ಬರ್ಮಿಂಗ್ಹ್ಯಾಮ್. ತುಂಬಾ ದಿನದಿಂದ ಪೂಜೆಗೆ ಹೋಗಿ ಬರಬೇಕು ಎಂದು ಯೋಚಿಸುತ್ತಿದ್ದರು, ಗೆಳೆಯರೊಬ್ಬರ ಕೊನೆ ನಿಮಿಷದ ಆಹ್ವಾನ ಅದನ್ನು ಸಾಕಾರ ಮಾಡಿತ್ತು.

ಅಪರಾಹ್ನದ ಪೂಜೆಯ ಸಮಯ 'ಬರ್ಮಿಂಗ್ಹ್ಯಾಮ್ ಬಾಲಾಜಿ' ಸನ್ನಿದಾನಕ್ಕೆಬಂದು ತಲುಪಿದೆವು. ವಿಶಾಲವಾದ ಜಾಗದಲ್ಲಿ ಕಟ್ಟಲಾಗಿರುವ ಸುಂದರ ದೇವಸ್ಥಾನ. ಆದರೆ ಭಾರತದ ದೇವಸ್ಥಾನಗಳಿಗೆ ಹೋಲಿಕೆ ಮಾಡಲು ಸಾದ್ಯವಿಲ್ಲ.

ಇರುವದು ನಾಲ್ಕೈದು ಚಿಕ್ಕ ದೇವಸ್ಥಾನಗಳು, ವೆಂಕಟೇಶನ ದೊಡ್ಡ ಮಂದಿರ. ಛಳಿಯಿಂದ ಪಾರಾಗಲು  ಬಾಗಿಲು ಮುಚ್ಚಿಕೊಂಡೆ ಇರುತ್ತದೆ. ವೆಂಕಟೇಶ್ವರನ ಗುಡಿಯ ಎದುರಿನಲ್ಲಿ ಶಿವ ಮತ್ತು ಗಣೇಶನ ಮಂದಿರ ಕಾಣುವದು ವಿಶೇಷ!
ದೇವಾಲಯದ ಒಳಗೆ ಹೋಗಲು ಬೂಟು ಬಿಚ್ಹಿ, ಗಂಟೆ ಬಾರಿಸಿ ಬರಬೇಕು ಅಂದಾಗ ಅಲ್ಲಿದ್ದ westernised ಮಕ್ಕಳ ಮುಖದಲ್ಲಿ ಕಾಣುವ ಕುತೂಹಲ/ಆತಂಕ ನಮಗೆ ವಿಚಿತ್ರ ಅನಿಸುತ್ತದೆ.

ದೇವಸ್ಥಾನದ ಒಳಗಡೆ ಮೊದಲು ಕಣ್ಣಿಗೆ ಬಿದ್ದಿದ್ದು 'organic milk only allowed in temple' ಎಂಬ ಬೋರ್ಡ್. ಹಣ್ಣುಗಳನ್ನು ಇಟ್ಟ ತಟ್ಟೆಯಲ್ಲಿ ಲಿಚ್ಚಿ, ಪ್ಯಾಶನ್ ಫ್ರುಟ್ ಇಂತ ಹಣ್ಣುಗಳು, ಹೂಗಳ ಮದ್ಯದಲ್ಲಿ ಅಲ್ಲಲ್ಲ್ಲಿ ಹಸಿರು ಹೂವುಗಳು, ಮುಡಿ ಒಪ್ಪಿಸಿರುವ ಮಕ್ಕಳು ಹೀಗೆ ಎಲ್ಲವೂ ಪ್ರದೇಶ/ಪರಿಸ್ಥಿತಿಗೆ ತಕ್ಕಂತೆ ಬದಲಾಗಿವೆ. 

ಕೊರೆಯುವ ಚಳಿಯಿಂದ ಪಾರಾಗಲು ವೈದಿಕರು ಸಹ ಜೆರ್ಕಿನ್ ಧರಿಸಿಯೇ ಪೂಜೆ ಮಾಡುತ್ತಾರೆ. ಪಂಚೆಯ ಅಡಿಯಲ್ಲಿ ಜೀನ್ಸ್ ತೊಟ್ಟಿರಬಹುದು. ಊರಿನಲ್ಲಿ ದೇವಸ್ಥಾನದ ಗರ್ಭಗುಡಿಗೆ ಅಂಗಿ ಧರಿಸಿ ಹೋದರೆ ದೇವರ ಮೂರ್ತಿಯನ್ನೇ ಶುದ್ದ ಮಾಡುತ್ತಾರೆನೋ ಎಂದು ನೆನಪಾಗಿ ನಗು ಬಂತು!

ನಾವು ಕುಳಿತಿದ್ದ ಪಕ್ಕದಲ್ಲಿ ಯಾವದೋ ಒಂದು ಸಂಸಾರದ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ವೈದಿಕರಾದಿಯಾಗಿ ಮನೆ ಮಂದಿಯೆಲ್ಲ ಜೆರ್ಕಿನ್ ಧರಿಸಿ ಸತ್ಯನಾರಾಯಣ ಪೂಜೆ ಮಾಡಿದರು. ಸಂಸ್ಕೃತದಲ್ಲಿ ಮಂತ್ರ, ಇಂಗ್ಲಿಷ್ನಲ್ಲಿ ಕೈಕರಣ ಹೀಗೆ ಪೂಜೆ ಸಾಗಿತ್ತು. ಪೂಜೆಯ ಕೊನೆಯಲ್ಲಿ ಮನೆ ಮಂದಿಗೆಲ್ಲ ಇಂಗ್ಲಿಷ್ನಲ್ಲಿ ಸತ್ಯನಾರಾಯಣ ಕಥೆಯ ಪುಸ್ತಕ ಕೊಟ್ಟು ಓದಲು ಹೇಳಿದರು. ಆ ಸಂಸಾರದ ಒಬ್ಬ ಮಹಿಳೆ ಸ್ಪಷ್ಟವಾದ ದ್ವನಿಯಲ್ಲಿ 'There was a wise king named Ulkamuk....' ಎಂದು ಪ್ರಾರಂಭಿಸಿದರು! ನನಗೆ 'onsite ಸತ್ಯನಾರಾಯಣ' ನೆನಪಿಗೆ ಬಂದ!

ಗ್ರಾನೈಟ್ ನೆಲದ ಮೇಲೆ ಒಂದು ಗಂಟೆ ಪೂಜೆಗೆ ಕುಳಿತು, ಕಾಲು ತಣ್ಣಗಾಗಿ ಎದ್ದು ನಿಲ್ಲಲು ತಡವರಿಸಿ ಪೂಜೆ ಮುಗಿಸಿ ಹೊರ ಬಂದೆವು. 

ಇಷ್ಟಕ್ಕೂ ನನಗೆ ಪೂಜಾ ವಿಧಾನಗಳು ಜಾಸ್ತಿ ತಿಳಿದಿಲ್ಲ. ದೇವರ ಪೂಜಾ ವಿಧಾನಕ್ಕಿಂತ, ದೇವರಲ್ಲಿ ಇಡುವ ನಂಬಿಕೆ ಭಕ್ತಿ ಮುಖ್ಯ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ.   ಪರಿಸ್ಥಿತಿಗೆ ತಕ್ಕಂತೆ ಅಚಾರ ವಿಚಾರಗಳು ಬದಲಾಗುತ್ತದೆ. ಯಾರೋ ಹೇಳಿದಂತೆ 'ಬದಲಾವಣೆ ಒಂದೇ ಸತ್ಯ....'