Monday, January 9, 2012

ಪಿಕಲಾಟಗಳು!



ಮದುವೆ ಮನೆಯಲ್ಲಿ ಮದುಮಗನ ಚಪ್ಪಲಿ ಹುದುಗಿಸಿ ದುಡ್ಡು ವಸೂಲಿ ಮಾಡುವ ಪದ್ಧತಿ ತೋರಿಸಿಕೊಟ್ಟ' 'ಹಂ ಆಪಕೆ ಹೈ ಕೌನ್' ಸಿನಿಮಾ ಬಂದು ವರ್ಷಗಳೇ ಕಳೆದಿದ್ದರೂ, ಅನುಭವ ಇರಲಿಲ್ಲ. ಸಂಪ್ರದಾಯಿಕ ಪದ್ದತಿಯಲ್ಲಿ ಮದುವೆ ಆಗುತ್ತಿದ್ದ ನನಗೆ ಈ ಪದ್ದತಿಯ ರುಚಿ ಹತ್ತಬಹುದು ಎಂಬ ಸುಳಿವು ಸಹ ನನಗಿರಲಿಲ್ಲ.
ಹೆಂಡತಿಯನ್ನು ಗೃಹಪ್ರವೇಶಕ್ಕೆ ಕರೆದುಕೊಂಡು ಹೋಗಲು ತಯಾರಾಗುತಿದ್ದಾಗ ನನ್ನ ಚಪ್ಪಲಿ ನಾಪತ್ತೆ. ನಾದನಿಯರು 2000 ರೂಪಾಯಿ ಕೇಳಿದಾಗಲೇ ನಾನು ಹಳ್ಳಕ್ಕೆ ಬಿದ್ದಿದ್ದು ಗೊತ್ತಾಗಿತ್ತು. ಆಗ ನನಗೆ ನೆನಪಾಗಿದ್ದು ನನ್ನ ಹಳೆಯ ಬಿಗ್ ಬಜಾರ್ ಚಪ್ಪಲಿ.  ತಯಾರಿಗೆ 4 ದಿನಗಳು ಮಾತ್ರ ನಾನು ಇದ್ದ ಕಾರಣ ಹೊಸ ಚಪ್ಪಲಿ ತೆಗೆದುಕೊಳ್ಳಬೇಕು ಎಂಬ ವಿಚಾರವು ಮರೆತು ಹೋಗಿತ್ತು.
ನನ್ನ ಮನೆಯವರೆಲ್ಲ ಆಗಲೇ ಮುಂದಕ್ಕೆ ಹೊರಟಿದ್ದರಿಂದ ಹೆಂಡತಿಗೆ ಚೌಕಾಸಿಯ ಜವಾಬ್ದಾರಿ ಬಿಟ್ಟೆ. ಅಂತು ಇಂತೂ 800 ರೂಪಾಯಿ ವ್ಯವಹಾರ ಕುದುರಿ, ಮಾವನ ಮನೆ ಬಿಡುವಾಗ 'ಪಾದುಕರಹಿತ' ಪರಿಸ್ತಿತಿಯಿಂದ ಪಾರಾದೆ.
ಮರುದಿನ ಮನೆದೇವರ ದರ್ಶನಕ್ಕೆ೦ದು ಯಾಣಕ್ಕೆ ಹೋದಾಗ ಕಿತ್ತು ಬಂದ ಚಪ್ಪಲಿ ನೋಡಿ 'ಛೆ! ಮದುವೆಯ ದಿನ ಚಪ್ಪಲಿ ಬಿಟ್ಟು ಬಂದಿದ್ದರೆ ಸ್ವಲ್ಪ ದುಡ್ಡಾದರೂ ಉಳಿಯುತ್ತಿತ್ತು' ಅನಿಸಿದ್ದು ಸುಳ್ಳಲ್ಲ!!


ಮದುವೆ ಆಯಿತು. ಹೆಂಡತಿ ನನ್ನೊಡನೆ ಇಂಗ್ಲಿಷ್ ನೆಲದ ಗೂಡಿನಲ್ಲಿ ನೆಲೆ ಊರಿ, ಸಂಸಾರ ನೌಕೆಯ ದಿಕ್ಕು ದಿಶೆ ಕಂಡುಕೊಳ್ಳುವ ಪ್ರಯತ್ನದಲ್ಲಿದ್ದೆ. ಇಂಗ್ಲಿಷ್ ವಾತಾವರಣದ ಪರಿಚಯ ಇದ್ದ ನಾನು ಮಾವನ ಮನೆಯಲ್ಲಿ ಕೊಟ್ಟಿದ್ದ (ನನ್ನವಳ ಶಬ್ದದಲ್ಲಿ ಹೇಳಬೇಕೆಂದರೆ 'ವರೋಪಚಾರಕ್ಕೆ' ಕೊಟ್ಟಿದ್ದ) ಕೊಡೆಯನ್ನು ನನಗಾಗಿ ತರಿಸಿ ಕೊಂಡಿದ್ದೆ. ಮದುವೆ ಆದ ಹೊಸ ದಿನಗಳಲ್ಲಿ ಮಳೆ ಬರುವ ದಿನಗಳಲ್ಲಿ ಹೆಂಡತಿ ನೆನಪು ಮಾಡಿ ಕೊಡೆ ಕೊಟ್ಟು ಆಫೀಸಿಗೆ ಕಳುಹಿಸಿದಾಗ ಏನೋ ಸಂಭ್ರಮ!
ಆ ದಿನ ಮೋಡ ಕವಿದ ವಾತಾವರಣ ನೋಡಿ ಕೊಡೆ ಹಿಡಿದು ಹೊರಟ ನನಗೆ, ಮೋಡ ತಿಳಿ ಆದ ಹಾಗೆ ಕೊಡೆಯ ನೆನಪು ತಿಳಿಯಾಯಿತು. ಎರಡು ದಿನದ ನಂತರ ಮತ್ತೆ ಮಳೆ ಬಂದಾಗ ಹೆಂಡತಿಯ ಗಮನಕ್ಕೆ ಬಂದಿದ್ದು ಮಾಯವಾದ 'ವರೋಪಚಾರದ' ಕೊಡೆ. ಅದರ ಮೇಲೆ ಸೆಂಟಿ dialogueಗಳು, ದಿನವಿಡೀ ಹುಡುಕಾಟ ಮತ್ತೆ ಸೆಂಟಿ dialogueಗಳು ಇದು ಯಾವದು ಸಂಸಾರಸ್ತರಿಗೆ ಹೊಸದಲ್ಲ!  ಮತ್ತೆ 3 ದಿನಗಳ ನಂತರ ತಂದ ಕೊಡೆ ಒಂದೇ ವಾರದಲ್ಲಿ ಕೈ ಕೊಟ್ಟು, ಅದರ ಕಡ್ಡಿಗಳು ಕೈಗೆ ಬಂದಾಗ ಮಳೆಯ ಜೊತೆ  ಸೆಂಟಿ dialogueಗಳು ಸುರಿದು ನೆನೆದು ತೊಪ್ಪೆಯಗಿದ್ದೆ. ಮೊನ್ನೆ ಜೋರಾಗಿ ಬೀಸಿದ ಗಾಳಿಯಲ್ಲಿ ಮತ್ತೊಂದು ಕೊಡೆ ಮುರಿದಾಗ ನನ್ನವಳು ಹೇಳಿದ್ದು ' ಅಯ್ಯೋ! ನಿಮಗೆ ಕೊಡೆಯ ಸಾಲವಳಿ ಇಲ್ಲ ಬಿಡಿ!!' ಸಂಸಾರ....