Tuesday, January 29, 2013

ಆಂಗ್ಲರ ನಾಡಿನಲ್ಲಿ ಸತ್ಯನಾರಾಯಣ ಪೂಜೆ!

ಮತ್ತೊಂದು ವಾರಾಂತ್ಯ, ಮತ್ತೊಂದು ಪ್ರವಾಸ!
ಈ ಸಲದ ಪ್ರವಾಸ 'ದೇಸಿ ಇಂಗ್ಲೆಂಡ್' ಎಂದು ಪ್ರಸಿದ್ದವಾಗಿರುವ ಬರ್ಮಿಂಗ್ಹ್ಯಾಮ್. ತುಂಬಾ ದಿನದಿಂದ ಪೂಜೆಗೆ ಹೋಗಿ ಬರಬೇಕು ಎಂದು ಯೋಚಿಸುತ್ತಿದ್ದರು, ಗೆಳೆಯರೊಬ್ಬರ ಕೊನೆ ನಿಮಿಷದ ಆಹ್ವಾನ ಅದನ್ನು ಸಾಕಾರ ಮಾಡಿತ್ತು.

ಅಪರಾಹ್ನದ ಪೂಜೆಯ ಸಮಯ 'ಬರ್ಮಿಂಗ್ಹ್ಯಾಮ್ ಬಾಲಾಜಿ' ಸನ್ನಿದಾನಕ್ಕೆಬಂದು ತಲುಪಿದೆವು. ವಿಶಾಲವಾದ ಜಾಗದಲ್ಲಿ ಕಟ್ಟಲಾಗಿರುವ ಸುಂದರ ದೇವಸ್ಥಾನ. ಆದರೆ ಭಾರತದ ದೇವಸ್ಥಾನಗಳಿಗೆ ಹೋಲಿಕೆ ಮಾಡಲು ಸಾದ್ಯವಿಲ್ಲ.

ಇರುವದು ನಾಲ್ಕೈದು ಚಿಕ್ಕ ದೇವಸ್ಥಾನಗಳು, ವೆಂಕಟೇಶನ ದೊಡ್ಡ ಮಂದಿರ. ಛಳಿಯಿಂದ ಪಾರಾಗಲು  ಬಾಗಿಲು ಮುಚ್ಚಿಕೊಂಡೆ ಇರುತ್ತದೆ. ವೆಂಕಟೇಶ್ವರನ ಗುಡಿಯ ಎದುರಿನಲ್ಲಿ ಶಿವ ಮತ್ತು ಗಣೇಶನ ಮಂದಿರ ಕಾಣುವದು ವಿಶೇಷ!
ದೇವಾಲಯದ ಒಳಗೆ ಹೋಗಲು ಬೂಟು ಬಿಚ್ಹಿ, ಗಂಟೆ ಬಾರಿಸಿ ಬರಬೇಕು ಅಂದಾಗ ಅಲ್ಲಿದ್ದ westernised ಮಕ್ಕಳ ಮುಖದಲ್ಲಿ ಕಾಣುವ ಕುತೂಹಲ/ಆತಂಕ ನಮಗೆ ವಿಚಿತ್ರ ಅನಿಸುತ್ತದೆ.

ದೇವಸ್ಥಾನದ ಒಳಗಡೆ ಮೊದಲು ಕಣ್ಣಿಗೆ ಬಿದ್ದಿದ್ದು 'organic milk only allowed in temple' ಎಂಬ ಬೋರ್ಡ್. ಹಣ್ಣುಗಳನ್ನು ಇಟ್ಟ ತಟ್ಟೆಯಲ್ಲಿ ಲಿಚ್ಚಿ, ಪ್ಯಾಶನ್ ಫ್ರುಟ್ ಇಂತ ಹಣ್ಣುಗಳು, ಹೂಗಳ ಮದ್ಯದಲ್ಲಿ ಅಲ್ಲಲ್ಲ್ಲಿ ಹಸಿರು ಹೂವುಗಳು, ಮುಡಿ ಒಪ್ಪಿಸಿರುವ ಮಕ್ಕಳು ಹೀಗೆ ಎಲ್ಲವೂ ಪ್ರದೇಶ/ಪರಿಸ್ಥಿತಿಗೆ ತಕ್ಕಂತೆ ಬದಲಾಗಿವೆ. 

ಕೊರೆಯುವ ಚಳಿಯಿಂದ ಪಾರಾಗಲು ವೈದಿಕರು ಸಹ ಜೆರ್ಕಿನ್ ಧರಿಸಿಯೇ ಪೂಜೆ ಮಾಡುತ್ತಾರೆ. ಪಂಚೆಯ ಅಡಿಯಲ್ಲಿ ಜೀನ್ಸ್ ತೊಟ್ಟಿರಬಹುದು. ಊರಿನಲ್ಲಿ ದೇವಸ್ಥಾನದ ಗರ್ಭಗುಡಿಗೆ ಅಂಗಿ ಧರಿಸಿ ಹೋದರೆ ದೇವರ ಮೂರ್ತಿಯನ್ನೇ ಶುದ್ದ ಮಾಡುತ್ತಾರೆನೋ ಎಂದು ನೆನಪಾಗಿ ನಗು ಬಂತು!

ನಾವು ಕುಳಿತಿದ್ದ ಪಕ್ಕದಲ್ಲಿ ಯಾವದೋ ಒಂದು ಸಂಸಾರದ ಸತ್ಯನಾರಾಯಣ ಪೂಜೆ ನಡೆಯುತ್ತಿತ್ತು. ವೈದಿಕರಾದಿಯಾಗಿ ಮನೆ ಮಂದಿಯೆಲ್ಲ ಜೆರ್ಕಿನ್ ಧರಿಸಿ ಸತ್ಯನಾರಾಯಣ ಪೂಜೆ ಮಾಡಿದರು. ಸಂಸ್ಕೃತದಲ್ಲಿ ಮಂತ್ರ, ಇಂಗ್ಲಿಷ್ನಲ್ಲಿ ಕೈಕರಣ ಹೀಗೆ ಪೂಜೆ ಸಾಗಿತ್ತು. ಪೂಜೆಯ ಕೊನೆಯಲ್ಲಿ ಮನೆ ಮಂದಿಗೆಲ್ಲ ಇಂಗ್ಲಿಷ್ನಲ್ಲಿ ಸತ್ಯನಾರಾಯಣ ಕಥೆಯ ಪುಸ್ತಕ ಕೊಟ್ಟು ಓದಲು ಹೇಳಿದರು. ಆ ಸಂಸಾರದ ಒಬ್ಬ ಮಹಿಳೆ ಸ್ಪಷ್ಟವಾದ ದ್ವನಿಯಲ್ಲಿ 'There was a wise king named Ulkamuk....' ಎಂದು ಪ್ರಾರಂಭಿಸಿದರು! ನನಗೆ 'onsite ಸತ್ಯನಾರಾಯಣ' ನೆನಪಿಗೆ ಬಂದ!

ಗ್ರಾನೈಟ್ ನೆಲದ ಮೇಲೆ ಒಂದು ಗಂಟೆ ಪೂಜೆಗೆ ಕುಳಿತು, ಕಾಲು ತಣ್ಣಗಾಗಿ ಎದ್ದು ನಿಲ್ಲಲು ತಡವರಿಸಿ ಪೂಜೆ ಮುಗಿಸಿ ಹೊರ ಬಂದೆವು. 

ಇಷ್ಟಕ್ಕೂ ನನಗೆ ಪೂಜಾ ವಿಧಾನಗಳು ಜಾಸ್ತಿ ತಿಳಿದಿಲ್ಲ. ದೇವರ ಪೂಜಾ ವಿಧಾನಕ್ಕಿಂತ, ದೇವರಲ್ಲಿ ಇಡುವ ನಂಬಿಕೆ ಭಕ್ತಿ ಮುಖ್ಯ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ.   ಪರಿಸ್ಥಿತಿಗೆ ತಕ್ಕಂತೆ ಅಚಾರ ವಿಚಾರಗಳು ಬದಲಾಗುತ್ತದೆ. ಯಾರೋ ಹೇಳಿದಂತೆ 'ಬದಲಾವಣೆ ಒಂದೇ ಸತ್ಯ....'



Wednesday, January 16, 2013

ಲಂಡನಲ್ಲಿ ಹೊಸ ವರುಷ!

ಈ ಸಲದ ಹೊಸ ವರುಷ ಲಂಡನ್ನಿನ ಪಟಾಕಿ ಉತ್ಸವದಲ್ಲಿ ಕಳೆಯುವ ಅವಕಾಶ ಒದಗಿ ಬಂತು. ಕ್ರಿಸ್ಮಸ್ ರಜೆಯ 10 ದಿನಗಳನ್ನು ಹೊರಗೆ ದೋ ಎಂದು ಸುರಿಯುತ್ತಿದ್ದ ಮಳೆ ನೋಡುತ್ತಾ ನಿದ್ದೆ ಮಾಡಿ ಕಳೆಯುತ್ತಿದ್ದೆ. ಮದ್ಯದಲ್ಲಿ ಗೆಳತಿ ದೀಪಾಳ ಪರಿವಾರದಿಂದ 'ಲಂಡನ್ ಪಟಾಕಿ' ಉತ್ಸವಕ್ಕೆ ಕರೆ ಸಿಕ್ಕಾಗ ಉತ್ಸಾಹದಿಂದ ಲಂಡನ್ ಗೆ ಪ್ರಯಾಣ ಬೆಳೆಸಿದೆ. ಡಿಸೆಂಬರ್ 31 ಕೂಡ ಮಳೆಯ ವಾತವರಣ ನೋಡಿ ನಿರಾಸೆ ಆಗುವ ಎಲ್ಲ ಲಕ್ಷಣಗಳು ಇದ್ದರೂ, ಇಂಗ್ಲಂಡನಲ್ಲಿ ಮಳೆಗೆ ಹೆದರಿದರೆ ಆಗುವದಿಲ್ಲ ಅಂದುಕೊಂಡಿದ್ದೆ.

ನಾವು ನಾಲ್ಕು ಸಂಸಾರ ಮತ್ತು ಪುಟಾಣಿ ಮನು ಜೊತೆ ಥೇಮ್ಸ್ ನದಿಯ ದಡಕ್ಕೆ ಬರುವದರಲ್ಲಿ ಸಾಕು ಸಾಕಾಗಿತ್ತು. ಸಾಯಂಕಾಲ 7 ಗಂಟೆಗೆ ಹೋದರು ನಮಗೆ ಮೊದಲನೇ ಸಾಲಿನಲ್ಲಿ ಜಾಗ ಸಿಗಲಿಲ್ಲ. ಒಂದು ಅಂದಾಜಿನಲ್ಲಿ 3 ಮಿಲಿಯನ್ ಜನರು ಇದರ ವೀಕ್ಷಣೆಗೆ ಬರುತ್ತಾರೆ. ಕೊರೆಯುವ ಚಳಿಯಲ್ಲಿ ಕೂಡ ಲಕ್ಷಾಂತರ ಜನರು 6-7 ಗಂಟೆ ಈ ಉತ್ಸವಕ್ಕೆ ಕಾದಿರುತ್ತಾರೆ.

 ಬರುವ ವ್ಯವಸ್ತೆಯನ್ನು ಸುಂದರವಾಗಿ ಮಾಡಿದ್ದರೂ, ವಾಪಸ್ಸು ಹೋಗುವಾಗ ಅವ್ಯವಸ್ತೆ ಪರಮಾವದಿ ಆಗಿತ್ತು. ಹತ್ತಿರದ 2-3 ರೈಲು ನಿಲ್ದಾಣವನ್ನು ಬಂದು ಮಾಡಿ ರಾತ್ರಿ 3 ಗಂಟೆಯವರೆಗೆ ಅಲೆಯುವಂತೆ ಮಾಡಿದರು. 

ಈ 8 ಗಂಟೆಯ ಪ್ರಯಾಸ ಕೇವಲ 15 ನಿಮಿಷದ ಪಟಾಕಿ ನೋಡುವದಕ್ಕಾಗಿ. ಪಂಜಾಬಿ ಬಂಗಡಾದಿಂದ ಗಂಗಂ ತನಕ ಹಾಡುಗಳು, ಅದಕ್ಕೆ ತಾಳ ಹಾಕುವ ಯುವಕ ಯುವತಿಯರು, ಅವರವರದೇ ಗುಂಗಿನಲ್ಲಿ ಮುಳುಗಿರುವ ಜನ, ಇವರನೆಲ್ಲ ನೋಡಿ ಮಜಾ ಮಾಡುತ್ತಿರುವ ನಾವು! 

12 ಗಂಟೆ ಬಾರಿಸುತ್ತಲೇ ಶುರುವಾದ ಪಟಾಕಿ ಮಾತ್ರ ಅವರ್ಣನೀಯ. ಲಯಬದ್ದವಾಗಿ ಸಿಡಿಯುವ ಪಟಾಕಿಗಳು ನಮ್ಮನ್ನು ಬೇರೆಯ ಲೋಕಕ್ಕೆ ಕರೆದೊಯ್ಯುತ್ತವೆ. ಲಕ್ಷಗಟ್ಟಲೆ ಕ್ಯಾಮೆರಗಳು, ಮೊಬೈಲುಗಳು, i-padಗಳು (ಇದು ಮಾತ್ರ ತುಂಬಾ ಅಸಹನೀಯ) ಒಮ್ಮೆಲೇ ಕ್ಲಿಕ್ಕಿಸುತ್ತವೆ. ಟಿವಿಯಲ್ಲಿ ನೋಡಿದರು ತುಂಬಾ ಸುಂದರವಾಗಿ ಕಾಣುವ ಈ ಉತ್ಸವವನ್ನು ನೇರವಾಗಿ ನೋಡುವದೆ ಒಂದು ವಿಶೇಷ ಅನುಭವ. ಈ ವರ್ಷದ ಪಟಾಕಿ ಉತ್ಸವವನ್ನು ನೋಡಿ.


ಈ ಪುಟಾಣಿಯ ಉತ್ಸಾಹದ ಮುಂದೆ ನಮ್ಮ ಉತ್ಸಾಹ ಕಡಿಮೆ ಅನಿಸುತಿತ್ತು.!

Wednesday, November 21, 2012

ವಾರದ ವಿಶೇಷ ವ್ಯಕ್ತಿಗಳು


ಬಾಳಾ ಟಾಕ್ರೆ: ಶಿವಸೇನೆ ಪಕ್ಷವನ್ನು ಹುಟ್ಟುಹಾಕಿ ಹಿಂದೂ ಜಾಗ್ರತಿಗೆ ಒಂದು ತೀಕ್ಷ್ಣ ಸ್ವರ ಕೊಟ್ಟ ಧುರೀಣ ರಾಜಕಾರಣಿ. ಮರಾಠಿ ಜನರ ಹೊರತಾಗಿ ಎಲ್ಲರನ್ನು ಹೊರಗಿನವರಂತೆ ಕಂಡ ಬಾಳಾ, ಕಾಂಗ್ರೆಸ್ಸ್ ಕೌಟುಂಬಿಕ ರಾಜಕಾರಣಕ್ಕೆ ಸವಾಲು ಹಾಕಿದ ಕೆಲವೇ ಕೆಲವು ಗಟ್ಟಿ ಜನಗಳಲ್ಲಿ ಒಬ್ಬ ಎಂಬ ಮಾತನ್ನು ಅಲ್ಲಗಳೆಯಲಾಗುವದಿಲ್ಲ. ಬೆಳಗಾವಿಯಲ್ಲಿ ತಂದಿಟ್ಟ ಕಲಹದಿಂದ ಕನ್ನಡಿಗರ ಹೃದಯದಲ್ಲಿ ಬಾಳಾಗೆ ಜಾಗ ಇಲ್ಲ. ಆದರೂ ರಾಜಕಾರಣದಲ್ಲಿ ದಿಟ್ಟ ನಿಲುವು, ಹಿಂದೂ ತೀವ್ರವಾದ, 'ಸರ್ಕಾರ್ ' ತರಹದ ಹೇಳಿಕೆಗಳು ಇಷ್ಟವಾಗುವ ವಿಚಾರಗಳು.
ಆದರೆ ವಯಸ್ಸು ಮೀರಿ ಬಾಳಾ 86 ವರ್ಷ ವಯಸ್ಸಿನಲ್ಲಿ ಸಾವಿಗೆ ಶರಣಾದ. ಒಂದು ಕಾಲು ಕೋಟಿ ಜನರಿಂದ ತುಂಬಿ ತುಳುಕುತ್ತಿರುವ ಮುಂಬೈಯನ್ನು 3 ದಿನ ಮುಚ್ಚಲಾಯಿತು. ಜಗತ್ತಿನ ಅತಿ ದೊಡ್ಡ ವಾಣಿಜ್ಯ ಕೇಂದ್ರವಾದ ಮುಂಬೈಯಲ್ಲಿ ಎಷ್ಟು ಕೋಟಿ ನಷ್ಟವಾಯಿತೋ?. ಯಾವುದೇ ಗಲಾಟೆ ಆಗದೆ ಇದ್ದರು ಬಂಧ ಅನ್ನು facebook ನಲ್ಲಿ ಪ್ರಶ್ನಿಸಿದ ಇಬ್ಬರು ಮಹಿಳೆಯರು ಜೈಲು ಸೇರಿದರು. ರಾಜಕುಮಾರ ಮರಣ ಹೊಂದಿದಾಗ ಬೆಂಗಳೂರು 1 ವಾರ ಬಂದ್ ಆಗಿ ಅಪಾರ ನಸ್ಟವಾಗಿದ್ದು ನೆನಪಾಯಿತು. ಆಂಧ್ರದ ಮುಖ್ಯಮಂತ್ರಿ YSR ಮರಣ ಹೊಂದಿದಾಗ ಪೂರ್ತಿ ಕರ್ನಾಟಕದಲ್ಲಿ ಕೂಡ ರಜೆ ಘೋಷಿಸಿದ್ದು ನೆನಪಿಗೆ ಬಂತು. ನಾವು ಭಾರತೀಯರು  ಪ್ರಸಿದ್ಧ ವ್ಯಕ್ತಿಗಳನ್ನು ಜನರಂತೆ ನೋಡದೆ ದೇವರ ಸಮಾನ ನೋಡುವ ಮನಸ್ಥಿತಿಯನ್ನು ಯಾವಾಗ ಬಿಡುತ್ತಿವೋ ಆ ದೇವರೇ ಬಲ್ಲ!

ಅಜ್ಮಲ್ ಕಸಬ್: ಮುಂಬೈ ದಾಳಿಯಲ್ಲಿ ಸಿಕ್ಕಿಬಿದ್ದ  ಉಗ್ರಗಾಮಿ. ನೂರಾರು ಅಮಾಯಕ ಜನರ ಸಾವಿಗೆ ಕಾರಣನಾದ ಉಗ್ರಗಾಮಿಗಳ ಪೈಕಿ ಸಿಕ್ಕಿಬಿದ್ದ ಒಬ್ಬ ಕ್ರಿಮಿ. ಕಳೆದ 4 ವರ್ಷದಲ್ಲಿ ಭಾರತೀಯ  ಮಾದ್ಯಮದಲ್ಲಿ ಅತ್ಯಂತ ಚಲಾವಣೆಯಲ್ಲಿ ಇದ್ದವನು ಕಸಬ್. ಭಾರತದ ರಾಷ್ಟ್ರಪತಿಯ ಬಗ್ಗೆ ಕೇಳಿರದಿದ್ದರೂ ಕಸಬ್ ಬಗ್ಗೆ ಕೇಳಿಯೇ ಕೇಳಿರುತ್ತಾರೆ. 4 ವರ್ಷದಲ್ಲಿ 20 ಕೋಟಿ ಖರ್ಚು ಮಾಡಿಸಿ, ಪುಕ್ಕಟ್ಟೆ ಪ್ರಸಿದ್ದಿ ಪಡೆದು, ಇಂದು ಗಲ್ಲಿಗೇರಿದ. ಭಾರತದ ಸಂಹಿದಾನದಲ್ಲಿ ಮರಣ  ದಂಡನೆ ಕೊಡುವ ಮತ್ತು ಅದನ್ನು ಜಾರಿಗೆ ತರುವ ಶಕ್ತಿ ಇನ್ನು ಇದೆ ಎಂದು ತಿಳಿದು ಸಂತೋಷವಾಯಿತು. ಆದರೆ ಇಂತ ಉಗ್ರಗಾಮಿ ಸಂಘಟನೆಗಳನ್ನು ದಿಟ್ಟವಾಗಿ ಹತ್ತಿಕ್ಕದೆ ಇದ್ದರೆ ಇಂತ ನೂರಾರು 'ಕಸ' ಗಳು ಬರುತ್ತಲೇ ಇರುತ್ತವೆ.